ಕರ್ನಾಟಕ ಬಜೆಟ್‌ನಲ್ಲಿ ಈ ಬಾರಿ ನೀರಾವರಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಉನ್ನತೀಕರಣ, ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀಟರ್‌ವರೆಗೆ ಎತ್ತರಿಸುವಿಕೆ, ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ಗುತ್ತಿಗೆ, ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜೊತೆಗೆ ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದೆ.